ಈಗ ಆಪರೇಶನ್ ಗ್ಯಾರಂಟಿ: ಸುಮಾರು 12 ಲಕ್ಷ ಬಿಪಿಎಲ್ ಕಾರ್ಡ್‌ಗಳಿಗೆ ಕತ್ತರಿ
ಬೆಂಗಳೂರು/ “ಅನರ್ಹತೆ’ಯ ಹಣೆಪಟ್ಟಿ ಹಚ್ಚಿ ಬಿಪಿಎಲ್ ಕಾರ್ಡ್‌ಗಳಿಗೆ ಕತ್ತರಿ ಹಾಕುವ ಮೂಲಕ ಗ್ಯಾರಂಟಿಗಳ ಪರಿಷ್ಕರಣೆಗೆ ಸರಕಾರ ಕೈ ಹಾಕಿದ್ದು, ಸುಮಾರು 12 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಮುಂದಾಗಿದೆ. ಇದರೊಂದಿಗೆ ಇವರಿಗೆ ಸಂದಾಯವಾಗುತ್ತಿದ್ದ ಗ್ಯಾರಂಟಿ ಸೌಲಭ್ಯವನ್ನು ಸ್ಥಗಿತಗೊಳಿಸಲು ಸರಕಾರ ಉದ್ದೇಶಿಸಿದ್ದು, ವಾರ್ಷಿಕ ಒಂದೂ ವರೆ ಸಾವಿರ ಕೋಟಿ ರೂ.ಉಳಿತಾಯ ಆಗಲಿದೆ!
ಈ ಮೂಲಕ ಸರಕಾರವು ತನ್ನ ಮಹತ್ವಾಕಾಂಕ್ಷಿ 5 ಗ್ಯಾರಂಟಿಗಳ ಪರಿಷ್ಕರಣೆಗೆ ಪರೋಕ್ಷವಾಗಿ ಮುನ್ನುಡಿ ಬರೆಯುತ್ತಿದೆ. ಸದ್ದಿಲ್ಲದೆ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಅಂದುಕೊಂಡಂತೆ ಎಲ್ಲವೂ ನಡೆದರೆ ಸರಕಾರಕ್ಕೆ ಅನಾಯಾಸವಾಗಿ ವಾರ್ಷಿಕ ಒಂದೂವರೆ ಸಾವಿರ ಕೋಟಿ ರೂ. ಉಳಿತಾಯ ಆಗಲಿದೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಸುಮಾರು 12 ಲಕ್ಷ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳು (ಬಿಪಿಎಲ್) ಅನರ್ಹ ಎಂದು ಗುರುತಿಸಿದ್ದಾರೆ. ಇದರಿಂದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಸಂಖ್ಯೆ ತಗ್ಗಲಿದೆ. ಹಾಗೆಯೇ ಆದಾಯ ತೆರಿಗೆ ಪಾವತಿಸು ತ್ತಿದ್ದರೂ ಬಿಪಿಎಲ್ ಕಾರ್ಡ್ ಆಧರಿಸಿ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುವವರಿದ್ದಾರೆ.
ಈಗ ಆದಾಯ ತೆರಿಗೆದಾರರನ್ನು ಪತ್ತೆ ಹಚ್ಚಿ ಬಿಪಿಎಲ್ ಕಾರ್ಡ್ ರದ್ದುಪಡಿಸುವುದರಿಂದ ಇವರಿಗೂ ಗ್ಯಾರಂಟಿ ಖೋತಾ ಆಗಲಿದೆ.
ರಾಜ್ಯದಲ್ಲಿ ಪ್ರಸ್ತುತ 10.84 ಲಕ್ಷ ಅಂತ್ಯೋದಯ ಸೇರಿ 1.27 ಕೋಟಿ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಇವರೆಲ್ಲರಿಗೂ ಮಾಸಿಕ ಪ್ರತೀ ಕುಟುಂಬದ ಸದಸ್ಯರಿಗೆ ತಲಾ 5 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ (ಅಂತ್ಯೋದಯದ ಒಂದು ಕುಟುಂಬಕ್ಕೆ 35 ಕೆ.ಜಿ. ಅಕ್ಕಿ). ಪ್ರತೀ ಕೆ.ಜಿ.ಗೆ 3 ರೂ. ಪಾವತಿಸಿ ಸರಕಾರ ಬಿಪಿಎಲ್ ಕಾರ್ಡ್‌ದಾರರಿಗೆ ಹಂಚಿಕೆ ಮಾಡುತ್ತಿದೆ. 12 ಲಕ್ಷ ಅನರ್ಹ ಕುಟುಂಬಗಳಿಗೆ 85-90 ಕೋಟಿ ರೂ. ವಾರ್ಷಿಕ ಖರ್ಚು ಮಾಡಲಾಗುತ್ತದೆ.
ಇದರ ಜತೆಗೆ “ಅನ್ನಭಾಗ್ಯ’ ಯೋಜನೆಯಡಿ ತಲಾ 5 ಕೆ.ಜಿ. ಅಕ್ಕಿ ಬದಲಿಗೆ ತಲಾ 170 ರೂ.ಗಳಂತೆ ನಗದು ನೀಡಲಾಗುತ್ತಿದೆ. ಪ್ರತೀ ಕುಟುಂಬದಲ್ಲಿ ಸರಾಸರಿ ನಾಲ್ವರು ಸದಸ್ಯರ ಲೆಕ್ಕ ಹಾಕಿದರೂ ಮಾಸಿಕ 680 ರೂ. ಪಾವತಿಸಲಾಗುತ್ತಿದೆ. ಅಂದರೆ ವರ್ಷಕ್ಕೆ ಒಂದು ಬಿಪಿಎಲ್ ಕುಟುಂಬಕ್ಕೆ 8,160 ರೂ. ಆಗುತ್ತದೆ. ಈ ಮೊತ್ತವನ್ನು ಅದೇ ಅನರ್ಹರಿಗೆ ಲೆಕ್ಕ ಹಾಕಿದಾಗ, 980 ಕೋಟಿ ರೂ. ಆಗುತ್ತದೆ. ಅಂದರೆ ಅಂದಾಜು 1,100 ಕೋಟಿ ರೂ. ಉಳಿತಾಯ ಆಗಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಹೊಸ ಬಿಪಿಎಲ್ ಕಾರ್ಡ್ ನೀಡಿದರೆ?
ಅನರ್ಹರನ್ನು ತೆಗೆದು ಹಾಕಿದರೆ, ಇದರ ಬೆನ್ನಲ್ಲೇ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದವರೂ ಇದ್ದಾರೆ ಎಂದು ಇಲಾಖೆ ವಾದ ಮುಂದಿಡಬಹುದು. ಆದರೆ ಅವರೇ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ 2.49 ಲಕ್ಷ ಅರ್ಜಿದಾರರು ಬಿಪಿಎಲ್ ಕಾರ್ಡ್ ಎದುರುನೋಡುತ್ತಿದ್ದಾರೆ.
ಒಂದು ವೇಳೆ 12 ಲಕ್ಷ ಅನರ್ಹ ಕಾರ್ಡ್‌ದಾರರನ್ನು ಪಟ್ಟಿಯಿಂದ ಕೈಬಿಟ್ಟರೆ ಅದಕ್ಕೆ ಬದಲಾಗಿ 2.49 ಲಕ್ಷ ಕುಟುಂಬಗಳು ಬಿಪಿಎಲ್ ಪಟ್ಟಿಗೆ ಸೇರುತ್ತವೆ. ಇನ್ನು ಪ್ರತೀ ತಿಂಗಳು ಪಡಿತರ ತೆಗೆದುಕೊಳ್ಳದೆ ಇರುವವರ ಪ್ರಮಾಣ ಶೇ. 8ರಿಂದ 9ರಷ್ಟಿದೆ. ಜತೆಗೆ ಮೃತಪಟ್ಟವರ ಹೆಸರುಗಳನ್ನೂ ಪಟ್ಟಿಯಿಂದ ಕೈಬಿಡುವ ಕೆಲಸ ಆಗಬೇಕಿದೆ. ಹಾಗಾಗಿ ಒಟ್ಟಾರೆಯಾಗಿ ಈ ಪ್ರಕ್ರಿಯೆಯಿಂದ ಸರಕಾರಕ್ಕೆ ಉಳಿತಾಯವೇ ಆಗಲಿದೆ.
ತೆರಿಗೆ ಪಾವತಿದಾರರಿಗೆ ಬಿಪಿಎಲ್!
ಸಾಮಾನ್ಯವಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಆದರೆ ಆದಾಯ ತೆರಿಗೆ ಪಾವತಿಸುವ 1.06 ಲಕ್ಷ ಕುಟುಂಬಗಳಿಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬಿಪಿಎಲ್ ಕಾರ್ಡ್ ನೀಡಿದೆ. ಒಟ್ಟಾರೆ 12 ಲಕ್ಷ ಅನರ್ಹರಲ್ಲಿ 1.06 ಲಕ್ಷ ತೆರಿಗೆ ಪಾವತಿದಾರರು ಇದ್ದರೆ, ವಾರ್ಷಿಕ 1.20 ಲಕ್ಷಕ್ಕೂ ಅಧಿಕ ಆದಾಯ ಹೊಂದಿರುವ 10.54 ಲಕ್ಷ ಕುಟುಂಬಗಳನ್ನು ಇಲಾಖೆ ಗುರುತಿಸಿದೆ. ವಿಚಿತ್ರವೆಂದರೆ 4,272 ಸರಕಾರಿ ನೌಕರರು ಕೂಡ ಈ ಸೌಲಭ್ಯ ಪಡೆಯುತ್ತಿರುವುದು ಪತ್ತೆಯಾಗಿದೆ. ಆದಾಯ ತೆರಿಗೆ ಸೇರಿ ವಿವಿಧೆಡೆ ಮಾಡಲಾದ ಆಧಾರ್’ ಸಂಖ್ಯೆ ಜೋಡಣೆ ಆಗಿರುತ್ತದೆ. ಅದನ್ನು ಇ-ಆಡಳಿತದಿಂದ ಕಲೆಹಾಕಿ, ಅನರ್ಹರ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಗೃಹಲಕ್ಷ್ಮಿಗೂ ಕತ್ತರಿ?
ತೆರಿಗೆ ಪಾವತಿ ಮಾಡುತ್ತಿದ್ದರೂ ಬಿಪಿಎಲ್ ಕಾರ್ಡ್ ಹೊಂದಿರುವ 1.06 ಲಕ್ಷ ಮಂದಿ ಇದ್ದಾರೆ. ಈ ಬಿಪಿಎಲ್ ಕಾರ್ಡ್ ನಿಂದಲೇ ಗೃಹಲಕ್ಷ್ಮಿ ಸೌಲಭ್ಯ ಪಡೆಯು ತ್ತಿದ್ದಾರೆ. ಈಗ ಅವರ ಪತ್ತೆ ಕೂಡ ಆಗಲಿದೆ. ಆಗ ಉದ್ದೇಶಿತ ಯೋಜನೆ ಯಡಿ ನೀಡುತ್ತಿರುವ ಮಾಸಿಕ 2 ಸಾವಿರ ರೂ. ಸ್ಥಗಿತ ಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಅದರಂತೆ ಒಂದು ಕುಟುಂಬದ ಯಜಮಾನಿಗೆ ವಾರ್ಷಿಕ 24 ಸಾವಿರ ರೂ.ಗಳನ್ನು ಸರಕಾರ ಪಾವತಿಸುತ್ತಿದೆ. ಅದನ್ನು ಒಂದು ಲಕ್ಷಕ್ಕೂ ಅಧಿಕ ಇರುವ ತೆರಿಗೆ ಪಾವತಿದಾರರೊಂದಿಗೆ ಲೆಕ್ಕ ಹಾಕಿದಾಗ ಅಂದಾಜು 250ರಿಂದ 300 ಕೋಟಿ ರೂ. ಆಗುತ್ತದೆ. ಅದೂ ಉಳಿತಾಯ ಆಗಬಹುದು ಎಂದು ಅಂದಾಜಿಸಲಾಗಿದೆ.
ಅನರ್ಹ ಕಾರ್ಡ್: ಅಗ್ರ 6 ಜಿಲ್ಲೆಗಳು
ಕೋಲಾರ-1.25 ಲಕ್ಷ
ಬೆಂಗಳೂರು-1.23 ಲಕ್ಷ
ತುಮಕೂರು -60,000
ದ. ಕನ್ನಡ -54,093
ಉಡುಪಿ-38,765
ಬೆಳಗಾವಿ- 19,969
ಸೇರ್ಪಡೆ ಮತ್ತು ಕೈಬಿಡುವ ಪ್ರಕ್ರಿಯೆಯು ನಿರಂತರವಾಗಿರುತ್ತದೆ. ಇದರಲ್ಲೇನೂ ಹೊಸ ದಿಲ್ಲ. ಈಗ ಕೆಲವು ಮಾನ ದಂಡಗಳನ್ನು ಆಧ ರಿಸಿ ಆದಾಯ ತೆರಿಗೆ ಪಾವತಿದಾರರ ಸಹಿತ ಅನರ್ಹ ಬಿಪಿಎಲ್ ಕಾರ್ಡ್‌ದಾರರ ಪಟ್ಟಿ ಮಾಡಲಾಗಿದೆ. ಅದನ್ನು ಆಯಾ ಜಿಲ್ಲೆಗಳಿಗೂ ಕಳುಹಿಸಲಾಗಿದೆ.